ಗೃಹಿಣಿಯಿಂದ ಉದ್ಯಮಿ – ಒಂದು ಪಯಣ

Lohkarya - Udyam Prakashan    10-Mar-2021
Total Views |

1_1  H x W: 0 x
 
 
 
 
2_1  H x W: 0 x
 
ಪ್ರಶ್ನೆ : ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೇಳುವಷ್ಟು ಅನಕೂಲಕರವಾಗಿಲ್ಲ, ಎಂಬುದಾಗಿ ಅನೇಕ ಬಾರಿ ಹೇಳಲಾಗುತ್ತದೆ. ನಿಮ್ಮ ಕಂಪನಿಯಲ್ಲಿ ಇಂದು ತಾವು ಉನ್ನತ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೀರಿ. ಈ ಕ್ಷೇತ್ರವನ್ನು ಆಯ್ಕೆ ಮಾಡುವಾಗ ನೀವು ಯಾವ ರೀತಿಯ ವಿಚಾರವನ್ನು ಮಾಡಿದ್ದೀರಿ?
ಉತ್ತರ : ‘ಪ್ರಕಾಶ್ ಹೋಮ್ ಇಂಡಸ್ಟ್ರೀಜ್’ ಈ ಕಂಪನಿಯು ಮಶಿನ್ ಟೂಲ್ ಉದ್ಯಮವನ್ನು ನಿರ್ವಹಿಸುತ್ತಿದೆ. ಈ ಹಿಂದೆ ನಾವು ಡ್ರಿಲ್ಲಿಂಗ್ ಮಶಿನ್ ನ ಅಸೆಂಬ್ಲಿಯನ್ನು ಮಾಡುತ್ತಿದ್ದೆವು. ನನ್ನ ಅಜ್ಜ ಮತ್ತು ಅವರ ತಮ್ಮ ಇಬ್ಬರೂ ಸೇರಿ 1961-62 ರಲ್ಲಿ ಈ ಉದ್ಯಮವನ್ನು ಪ್ರಾರಂಭಿಸಿದರು. ಅದರ ನಂತರ ನನ್ನ ತಂದೆಯವರು ಈ ಉದ್ಯಮವನ್ನು ಮುಂದುವರಿಸಿದರು. ನಮ್ಮ ತಂದೆಯವರಿಗೆ ನಾವು ಮತ್ತು ನನ್ನ ತಂಗಿ ಎರಡು ಹೆಣ್ಣು ಮಕ್ಕಳು ಮಾತ್ರ. ಉದ್ಯಮವು ತುಂಬಾ ಯೋಗ್ಯ ರೀತಿಯಲ್ಲಿ ನಡೆಯುತ್ತಿತ್ತು. ಆದರೆ ಯಾವುದೊಂದು ಸಮಯದಲ್ಲಿ, ಇನ್ನು ಮುಂದೆ ಈ ಉದ್ಯಮವನ್ನು ಯಾರು ಮುಂದುವರಿಸಬಲ್ಲರು ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿತ್ತು, ಇದರ ಸ್ಥಿತಿಯು ಏನಾಗಬಲ್ಲದು, ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗುತ್ತಿತ್ತು. ಅದೇ ವೇಳೆಯಲ್ಲಿ ಅಂದರೆ 2008 ರಲ್ಲಿ ನಮ್ಮ ತಂದೆಯವರು ನನಗೆ ವಿಶ್ವಾಸ ಮತ್ತು ಹುಮ್ಮಸ್ಸನ್ನು ನೀಡಿ, ಈ ಕಂಪನಿಯ ಜವಾಬ್ದಾರಿಯನ್ನು ವಹಿಸುವ ಪ್ರಸ್ತಾಪವನ್ನು ಮಾಡಿದರು. ನನಗೋಸ್ಕರ ಮಾತ್ರ ಇದು ಸೊನ್ನೆಯಿಂದ ಪ್ರಾರಂಭಿಸುವ ಹಂತವಾಗಿತ್ತು. ಈ ಪರಿಸ್ಥಿತಿಯ ಅರಿವು ಅವರಿಗಿತ್ತು. ಎಲ್ಲ ರೀತಿಯ ತರಬೇತಿ, ಮಾರ್ಗದರ್ಶನವನ್ನು ಪಡೆಯಬೇಕಾಗುತ್ತದೆ. ಅದನ್ನು ನಾನು ನೀಡಲು ಸಿದ್ಧನಾಗಿದ್ದೇನೆ, ನಿರಂತರವಾಗಿ ನನ್ನ ಸಲಹೆ- ಸೂಚನೆಗಳು ನಿನ್ನೊಂದಿಗೆ ಇವೆ, ಎಂಬುದಾಗಿ ಅವರು ನನ್ನನ್ನು ಹುರಿದುಂಬಿಸಿದರು. ಇದರಂತೆ 1 ಜೂನ್ 2008 ರಂದು ನಾವು ಉದ್ಯಮವೆಂಬ ಜಗತ್ತಿನಲ್ಲಿ ಕಾಲೂರಿದೆ.
ಪ್ರಶ್ನೆ : ಈ ಉದ್ಯಮದಲ್ಲಿ ಮಾಡಲಾಗಿರುವ ತಮ್ಮ ಪ್ರವಾಸದ ಕುರಿತು ಏನು ಹೇಳಬಲ್ಲಿರಿ?
ಉತ್ತರ : ತಂದೆಯವರ ಸಲಹೆಯಂತೆ ನಾನು ಪ್ರಾರಂಭದ ದಿನಗಳಲ್ಲಿ ಕಂಪನಿಗೆ ಪ್ರತಿ ದಿನವೂ ಭೇಟಿ ನೀಡಲಾರಂಭಿಸಿದೆ. ಅಲ್ಲಿ ಏನೇನು ನಡೆಯುತ್ತಿದೆ, ಎಂಬುದನ್ನು ವೀಕ್ಷಿಸುತ್ತಿದ್ದೆ. ಶಾಪ್ ಫ್ಲೋರ್ ನಲ್ಲಿ ಕೆಲಸವನ್ನು ಹೇಗೆ ನಿರ್ವಹಿಸಲಾಗುತ್ತದೆ, ಎಂಬುದರ ಕುರಿತು ನನಗೆ ಸ್ವಲ್ಪವೂ ತಿಳಿಯುತ್ತಿರಲಿಲ್ಲ. ಹಲವಾರು ವಿಷಯಗಳನ್ನು ನಾನೇ ಅರ್ಥೈಸಿ ತಿಳಿದುಕೊಳ್ಳುತ್ತಿದ್ದೆ. ಕೆಲಮೊಮ್ಮೆ ಅಲ್ಲಿರುವವರನ್ನು ಕೇಳಿ ತಿಳಿದು ಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಮೂರು ತಿಂಗಳ ನಂತರ ನನಗೆ ನಿಧಾನವಾಗಿ ನಡೆಯುತ್ತಿರುವ ಕೆಲಸದ ಕುರಿತು ಅರಿವಾಗಲಾರಂಭಿಸಿತು. ಅಲ್ಲಿರುವ ‘ಲೂಪ್ ಹೋಲ್ಸ್’ಗಳೂ ತಿಳಿಯಲಾರಂಭಿಸಿದವು. ಇಂತಹ ‘ಲೂಪ್ ಹೋಲ್ಸ್’ಗಳನ್ನು ಹೇಗೆ ನೀಗಿಸಬಹುದು, ಎಂಬುದರ ಕುರಿತು ತಂದೆಯವರಲ್ಲಿ ವಿಚಾರ ವಿಮರ್ಶೆಯನ್ನು ಮಾಡಲಾರಂಭಿಸಿದೆ. ನನಗೆ ತಾಂತ್ರಿಕ ಜ್ಞಾನ ಸ್ವಲ್ಪವೂ ಇಲ್ಲದಿದ್ದರಿಂದ ವಿಶೇಷವಾಗಿ ತಾಂತ್ರಿಕ ಸಮಸ್ಯೆಗಳ ಕುರಿತು ಯಾವ ನಿರ್ಧಾರವನ್ನು ಪಡೆಯಬೇಕು, ಹೇಗೆ ವಿಚಾರ ಮಾಡಬೇಕು, ಇವೆಲ್ಲವೂ ಕಠಿಣವೇ ಆಗಿತ್ತು. ಮೊತ್ತ ಮೊದಲಾಗಿ HR ವಿಭಾಗವನ್ನು ನಾನೇ ನೋಡಲಾರಂಭಿಸಿದೆ. ಅದರ ನಂತರ ಪರ್ಚೆಸ್ ವಿಭಾಗ, ಶಾಪ್ ಫ್ಲೋರ್ ಹೀಗೆ ಎಲ್ಲ ವಿಭಾಗಗಳ ಕಡೆಗೆ ಗಮನ ಹರಿಸಲಾರಂಭಿಸಿದೆ.

1_1  H x W: 0 x
 
ಪ್ರಶ್ನೆ : ಕಂಪನಿಯಲ್ಲಿ ಕೆಲಸವನ್ನು ಪ್ರಾರಂಭಿಸಿದ ನಂತರ ಎಲ್ಲರೂ ತಮಗೆ ಹೇಗೆ ಸಹಕರಿಸಿದರು?
ಉತ್ತರ : ನಾವು ಕಂಪನಿಯಲ್ಲಿ ಹಾಜರಾತಿಯನ್ನು ಕೊಡುವುದು ನನಗೂ, ಅಲ್ಲದೇ ಅಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೂ ಹೊಸದಾದ ಅನುಭವವಾಗಿತ್ತು. ನಾನೊಬ್ಬ ಮಹಿಳಾ ಅಧಿಕಾರಿಯಾಗಿದ್ದರಿಂದ, ಪ್ರಾರಂಭದಲ್ಲಿ ಎಲ್ಲರೂ ಸ್ವಲ್ಪ ಮಟ್ಟಿಗೆ ಮುಜುಗರದಿಂದಲೇ ಸಹಕರಿಸುತ್ತಿದ್ದರು. “ಇವರು ಈಗ ತಾನೇ ಬಂದಿದ್ದಾರೆ. ನಾವು ಇಲ್ಲಿ ದೀರ್ಘ ಕಾಲಾವಧಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಅವರಿಗೆ ಇಲ್ಲಿ ನಡೆಯುವ ಕೆಲಸದ ಕುರಿತು ಏನು ತಿಳಿದಿದೆ,” ಇಂತಹ ಸಂಭಾಷಣೆಯು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂತು. ಈ ರೀತಿಯ ಪರಿಸ್ಥಿತಿಯನ್ನು ಹೇಗೆ ಎದುರಿಸುವುದು, ಎಂಬ ಸಮಸ್ಯೆಯು ನನ್ನನ್ನು ಕಾಡುತ್ತಿತ್ತು. ಕಂಪನಿಯನ್ನು ಸೂಕ್ತ ರೀತಿಯಲ್ಲಿ ನಡೆಸಲು ಎಲ್ಲರ ವಿಶ್ವಾಸವನ್ನು ಗಳಿಸಿಬೇಕಾಗುತ್ತದೆ. ಇಂತಹ ವಿಶ್ವಾಸವನ್ನು ಗಳಿಸಲು ಪ್ರತಿ ತಿಂಗಳು ಕೆಲಸಗಾರರೊಬ್ಬರ ಕುಟುಂಬದವರನ್ನು ಕಂಪನಿಗೆ ಆಮಂತ್ರಿಸಲಾರಂಭಿಸಿದೆವು. ಅವರಿಗೆ ಕಂಪನಿಯಲ್ಲಿ ತಿರುಗಾಡಿಸಿ, ಕಂಪನಿಯಲ್ಲಿ ಹೇಗೆ ಕೆಲಸ ಮಾಡಲಾಗುತ್ತದೆ, ಎಂಬ ಮಾಹಿತಿಯನ್ನು ತಿಳಿಸಲಾರಂಭಿಸಿದೆವು. ಇದರಿಂದಾಗಿ ಕೆಲಸಗಾರರ ಕುಟುಂಬಸ್ಥರು ಮತ್ತು ನಮ್ಮೆಲ್ಲರ ಸಂಬಂಧವು ದೃಢವಾಗುವುದು ಸುಲಭವಾಯಿತು. ನಾವು ಕೆಲಸಗಾರರ ಹುಟ್ಟುಹಬ್ಬದ ದಿನವನ್ನೂ ಆಚರಿಸಲಾರಂಭಿಸಿದೆವು. ಇಂತಹ ಉಪಾಯಗಳಿಂದಾಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುವವರೊಂದಿಗೆ ಹೊಂದಾಣಿಕೆಯನ್ನು ಮಾಡುವುದು ಅಷ್ಟೇನು ಕಠಿಣವಾಗಿಲ್ಲ. ನನ್ನನ್ನು ತಿಳಿದುಕೊಳ್ಳಲು ಮತ್ತು ಅವರೆಲ್ಲರೂ ಏನು-ಹೇಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಸುಲಭ ಸಾಧ್ಯವಾಯಿತು. ನಮ್ಮ ಕಂಪನಿಯಲ್ಲಿ 30-35 ವರ್ಷಗಳ ಕಾಲಾವಧಿಯಲ್ಲಿ ಕೆಲಸ ನಿರ್ವಹಿಸುವವರು ಇಂದಿಗೂ ನಮ್ಮ ಕಂಪನಿಯಲ್ಲಿದ್ದಾರೆ, ಎಂಬುದನ್ನು ವಿಶೇಷವಾದ ನಮೂದಿಸುತ್ತೇನೆ. ನನ್ನ ತಂದೆಯವರೊಂದಿಗೆ ಕೆಲಸ ನಿರ್ವಹಿಸುತ್ತಿದ್ದವರೂ ನನ್ನ ಜೊತೆಗೆ ಕೆಲಸ ನಿರ್ವಹಿಸುತ್ತಿದ್ದಾರೆ, ಇದೇ ನನ್ನ ಯಶಸ್ಸು, ಎಂಬುದಾಗಿ ನಾನು ತಿಳಿಯುತ್ತೇನೆ, ಅಲ್ಲದೆ ಇದು ನನಗೆ ಸಮಾಧಾನವನ್ನುಂಟು ಮಾಡಿದೆ. ಪ್ರತಿಯೊಬ್ಬ ಗ್ರಾಹಕರಿಗೆ ಮತ್ತು ಪೂರೈಕೆಗಾರರಿಗೆ ನೀಡಿರುವ ಅಶ್ವಾಸನೆಗಳನ್ನು ಯೋಗ್ಯ ರೀತಿಯಲ್ಲಿ ಶೇಕಡಾ 100 ರಷ್ಟು ಪೂರ್ತಿಗೊಳಿಸುವ ಪ್ರಯತ್ನವನ್ನು ನಾವು ನಿರಂತರವಾಗಿ ಮಾಡುತ್ತಿದ್ದೇವೆ. ಆದ್ದರಿಂದ ಅವರೂ ನಮ್ಮಲ್ಲಿ ವಿಶ್ವಾಸವನ್ನಿಟ್ಟಿದ್ದಾರೆ. ಡೆಲಿವರ್ ಯು ಸೂಕ್ತ ಸಮಯದಲ್ಲಿಯೇ ಆಗುತ್ತಿರುವುದರಿಂದ ಸಮಾಧಾನಿಗಳಾಗಿದ್ದಾರೆ. ಅವರ ಸಮಾಧಾನವೇ ನಮಗೆ ಸಿಕ್ಕಿರುವ ಪ್ರಮಾಣಪತ್ರ, ಎಂದು ಹೇಳಿದರೆ ತಪ್ಪಾಗಲಾರದು.
ಪ್ರಶ್ನೆ : ಶಾಪ್ ಫ್ಲೋರ್ ನಲ್ಲಿರುವ ತಾಂತ್ರಿಕ ಅಥವಾ ಇನ್ನಿತರ ಸಮಸ್ಯೆಗಳನ್ನು ತಾವು ಹೇಗೆ ನಿರ್ವಹಿಸುತ್ತೀರಿ?
ಉತ್ತರ : HR ವಿಭಾಗದ ಎಲ್ಲ ಕೆಲಸಗಳ ಮಾಹಿತಿಯನ್ನು ಪಡೆದ ನಂತರ ನಾನು ಪರ್ಚೆಸ್ ಮತ್ತು ತಾಂತ್ರಿಕ ಅಂಶಗಳ ಕುರಿತು ಗಮನ ಹರಿಸಲು ಪ್ರಾರಂಭಿಸಿದೆ. ನನ್ನ ತಂದೆಯವರು ನನಗೆ ಡ್ರಾಯಿಂಗ್ ಹೇಗೆ ಓದಬೇಕು, ಎಂಬುದನ್ನು ತಿಳಿಸಿದರು. ಡ್ರಾಯಿಂಗ್ ನಲ್ಲಿರುವ ಸೂಕ್ಷ ವಿಷಯಗಳು ನನಗೆ ತಿಳಿಯದಿದ್ದರೂ ಕೂಡಾ, ಯಾರೇ ಗ್ರಾಹಕರು ನಮ್ಮಲ್ಲಿಗೆ ಬಂದಾಗ ಅವರು ನೀಡಿರುವ ಡ್ರಾಯಿಂಗ್ ಗೆ ಅನುಸಾರವಾಗಿ ಕೆಲಸ ನಿರ್ವಹಿಸುವುದು ಸಾಧ್ಯವಿದೆಯೇ ಇಲ್ಲವೇ, ಎಂಬುದನ್ನು ನಾನು ಇಂದು ಹೇಳಬಲ್ಲೆ. ನಮ್ಮ ಕಂಪನಿಯ ತಾಂತ್ರಿಕ ಮತ್ತು ಗುಣಮಟ್ಟದ ವಿಭಾಗದಲ್ಲಿ ನುರಿತ ಕೆಲಸಗಾರರಿದ್ದಾರೆ. ಅವರಿಂದಲೇ ಡ್ರಾಯಿಂಗ್ ಸಂಬಂಧಪಟ್ಟ ಎಲ್ಲ ರೀತಿಯ ಕೆಲಸಗಳನ್ನು ಮಾಡಿಕೊಳ್ಳುತ್ತೇನೆ. ನಮ್ಮಲ್ಲಿ ಪ್ರಾರಂಭದಿಂದಲೂ ಮರಾಠಿ ಭಾಷೆಯಲ್ಲಿ ಮುದ್ರಿತವಾಗುವ ‘ಧಾತುಕಾಮ’ (ಕನ್ನಡದಲ್ಲಿ ‘ಲೋಹಕಾರ್ಯ’) ಸಂಚಿಕೆಯು ಬರುತ್ತಿದೆ. ಈ ಮಾಸ ಪತ್ರಿಕೆಯಲ್ಲಿ ಮುದ್ರಿಸಲಾಗಿರುವ ಮಾಹಿತಿಯನ್ನು ನಮ್ಮ ಶಾಪ್ ಫ್ಲೋರ್ ನಲ್ಲಿ ಹೇಗೆ ಬಳಸಬಹುದು, ಎಂಬ ಕುರಿತಾಗಿ ನಾವು ಆಗಾಗ ವಿಚಾರ ವಿಮರ್ಶೆಯನ್ನು ಮಾಡುತ್ತೇವೆ. ಇದರೊಂದಿಗೆ ತಾಂತ್ರಿಕ ಮಾಸಿಕಗಳು, ಮಾಸ ಪತ್ರಿಕೆಗಳನ್ನು ಓದಿ ನಾನು ಸ್ವಂತ ಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದೇನೆ.
ಶಾಪ್ ಫ್ಲೋರ್ ನಲ್ಲಿ ಯಾವುದೇ ಚಿಕ್ಕ-ಪುಟ್ಟ ಸಮಸ್ಯೆಯು ಎದುರಾದಲ್ಲಿ ಅನೇಕ ಬಾರಿ ನನಗಿರುವ ತಾಂತ್ರಿಕ ಶಿಕ್ಷಣದ ಅಭಾವದಿಂದಾಗಿ ಅದರ ಅಹಿತಕರವಾದ ಲಾಭವನ್ನು ಪಡೆಯಲಾಗುತ್ತಿತ್ತು. ಪ್ರತ್ಯಕ್ಷವಾಗಿ ತೀರಾ ಚಿಕ್ಕ ಸಮಸ್ಯೆ ಇರುತ್ತಿತ್ತು. ಆದರೆ ಅದನ್ನು ತುಂಬಾ ದೊಡ್ಡ ಸಮಸ್ಯೆ ಎಂಬುದಾಗಿ ತೋರಿಸಲಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ನಾನು 3-4 ಕೆಲಸಗಾರರಿಂದ ಅದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಲಾರಂಭಿಸಿದೆ. ಅವರ ಅನಿಸಿಕೆಗಳೇನು, ಎಂಬುದನ್ನು ತಿಳಿದುಕೊಂಡೆ. ಅದಕ್ಕೆ ಸಮರ್ಪಕವಾದ ವಿಶ್ಲೇಷಣೆಯನ್ನು ಮಾಡಿ ಆ ಕೆಲಸವನ್ನು ಕನಿಷ್ಠ ಪ್ರಮಾಣದಲ್ಲಿ ಹೇಗೆ ನಿರ್ವಸಬಹುದು, ಎಂಬುದನ್ನು ಗಮನ ಹರಿಸಿ ನೋಡುತ್ತಿದ್ದೆ. ಇದರಿಂದಾಗಿ ಅನೇಕ ವಿಷಯಗಳನ್ನು ತಿಳಿದುಕೊಂಡೆ. ಈ ರೀತಿಯ ಘಟನೆಗಳನ್ನು ಎದುರಿಸಲು ನಾನು ನಿರಂತರವಾಗಿ ಸಿದ್ಧಳಾಗಿದ್ದೆ. ಶಾಪ್ ಫ್ಲೋರ್ ನಲ್ಲಿ ನಡೆಯುವ ಪ್ರತಿಯೊಂದು ವಿಷಯಗಳ ಕುರಿತಾದ ಮಾಹಿತಿಯನ್ನು ವಿಸ್ತಾರವಾಗಿ ತಿಳಿದುಕೊಂಡು, ಅದರ ಕುರಿತು ಸೂಕ್ತವಾಗಿ ನಿರಂತರವಾಗಿ ವಿಮರ್ಶೆಯನ್ನು ಮಾಡುತ್ತಿದ್ದರಿಂದ, ಈಗ ಸುಲಭ ಮತ್ತು ಸುಲಲಿತವಾಗಿ ವ್ಯವಸ್ಥಾಪನೆಯನ್ನು ನಿರ್ವಹಿಸುತ್ತಿದ್ದೇನೆ.
ಪ್ರಶ್ನೆ : ನಿಮ್ಮ ಕಂಪನಿಯಲ್ಲಿ ಎಷ್ಟು ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ? ಮಹಿಳೆಯರಿಗೆ ಕಂಪನಿಯಲ್ಲಿ ಮಾಡಬೇಕಾಗಿರುವ ತೀರ್ಮಾನಗಳಲ್ಲಿ ಎಷ್ಟು ಸ್ಥಾನವಿದೆ?
ಉತ್ತರ : ನಾನು ಕಂಪನಿಯಲ್ಲಿ ಕೆಲಸವನ್ನು ಪ್ರಾರಂಭಿಸಿದಾಗ ಕೇವಲ ಹೌಸ್ ಕೀಪಿಂಗ್ ಗೆ ಮಾತ್ರ ಮಹಿಳೆಯರಿದ್ದರು. ಇಂದು 100 ಕ್ಕೂ ಹೆಚ್ಚು ಕೆಲಸಗಾರರು ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, 10-12 ಮಹಿಳೆಯರಿದ್ದಾರೆ. ಪೈಂಟಿಂಗ್ ಶಾಪ್, ಡ್ರಿಲ್ಲಿಂಗ್ ವಿಭಾಗ, HR, ಸೇಲ್ಸ್ ಇಂತಹ ವಿಭಾಗಗಳಲ್ಲಿ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಮಶಿನಿಂಗ್ ವಿಭಾಗದಲ್ಲಿಯೂ ಒಬ್ಬ ಮಹಿಳೆ ಸ್ವತಂತ್ರವಾಗಿ ವಿ.ಎಮ್.ಸಿ. ಮಶಿನ್ ಕೂಡಾ ನಡೆಸುತ್ತಿದ್ದಾಳೆ. ನಮ್ಮಲ್ಲಿರುವ ಸೇಲ್ಸ್ ಮತ್ತು HR ವಿಭಾಗದ ಕೆಲಸವನ್ನು ಎರಡು ಮಹಿಳೆಯರು ನಿಭಾಯಿಸುತ್ತಾರೆ. ಕಂಪನಿಯಲ್ಲಿ ಯಾವುದೇ ರೀತಿಯ ನಿರ್ಧಾರವನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಶೇಕಡಾ 60 ರಷ್ಟು ಮಹಿಳೆಯರು ಸಹಭಾಗಿಯಾಗಿರುತ್ತಾರೆ. ಇಂತಹ ಸ್ಥಿತಿಯನ್ನು ವೀಕ್ಷಿಸಿದಾಗ ನನಗೆ ತುಂಬಾ ಸಂತೋಷವಾಗುತ್ತದೆ. ಅಲ್ಲದೇ ನಾವು ಮಾಡುತ್ತಿರುವ ಪ್ರಯತ್ನವು ಸಾರ್ಥಕವಾಗುತ್ತಿದೆ ಎಂಬ ಸಮಾಧಾನವು ಸಿಗುತ್ತದೆ.
ಒಟ್ಟಿನಲ್ಲಿ ಪ್ರತಿಯೊಂದೆಡೆ ಮಹಿಳೆಯರು ಹೆಚ್ಚು ಮನಸ್ಸಿಟ್ಟು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಾರೆ. ಬೆಳಗಾವಿಯ ಸುತ್ತಮುತ್ತ ಅನೇಕ ಮಹಿಳಾ ಉದ್ಯಮಿಗಳಿದ್ದಾರೆ ಮತ್ತು ವರ್ಕಿಂಗ್ ಕ್ಲಾಸ್ ನಲ್ಲಿಯೂ ಬೃಹತ್ ಪ್ರಮಾಣದಲ್ಲಿ ಮಹಿಳೆಯರು ಇರುವುದು ಒಂದು ಹೆಮ್ಮೆಯ ವಿಷಯವೇ ಸರಿ.
ಪ್ರಶ್ನೆ : ಮಹಿಳಾ ದಿನಾಚರಣೆಗೋಸ್ಕರ ಯಾಂತ್ರಿಕ ಕ್ಷೇತ್ರದಲ್ಲಿ ನೇರವಾಗಿ ಕೆಲಸ ನಿರ್ವಹಿಸುವ ಮತ್ತು ಈ ಕ್ಷೇತ್ರದಲ್ಲಿ ಹೊಸದಾಗಿ ಬರುತ್ತಿರುವ ಮಹಿಳೆಯರಿಗೆ ತಾವು ಯಾವ ಸಂದೇಶವನ್ನು ನೀಡುತ್ತೀರಿ?
ಉತ್ತರ : ನನ್ನ ತಂದೆಯವರು ನನ್ನಲ್ಲಿ ವಿಶ್ವಾಸ ಇಟ್ಟಿರುವುದರಿಂದ ಅಲ್ಲದೇ ಅವರು ನೀಡಿರುವ ಜವಾಬ್ದಾರಿಯನ್ನು ನಾನು ಈ ಕಂಪನಿಯ ಗೇಟ್ ಮೂಲಕ ಮೊತ್ತ ಮೊದಲಾಗಿ ಒಳಗೆ ಪ್ರವೇಶಿಸುವಾಗಲೇ ಸೂಕ್ತ ರೀತಿಯಲ್ಲಿ ನಿಭಾಯಿಸುವ ನಿರ್ಧಾರವನ್ನು ಮಾಡಿದ್ದೆ. ಈ ಕಂಪನಿಯ ಕೆಲಸವು ಎಂದಿಗೂ ನಿಲ್ಲಲು ಬಿಡಲಾರೆ. ಅದಕ್ಕೋಸ್ಕರ ಯಾವ ರೀತಿಯ ಸುಧಾರಣೆಗಳನ್ನು ಮಾಡಬೇಕು, ಎಂಬುದರ ಕುರಿತು ನಾನು ನಿರಂತರವಾಗಿ ವಿಚಾರ ಮಾಡುತ್ತಿದ್ದೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡಲ್ಲಿ ಅದನ್ನು ಅರ್ಧಕ್ಕೆ ಬಿಡದೇ ದೃಢ ಮತ್ತು ಅವಿರತ ಯತ್ನದಿಂದ ಪೂರ್ತಿಗೊಳಿಸುವ ಗುಣದಿಂದಾಗಿ ನನಗೆ ತುಂಬಾ ಲಾಭವಾಯಿತು. ಕಂಪನಿಯು ಪ್ರಾರಂಭಗೊಳ್ಳುವಾಗ ನಮ್ಮಲ್ಲಿ ಪಾರಂಪಾರಿಕವಾದ ಸೆಟಪ್ ಇತ್ತು. ಅದರಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಮಾಡುತ್ತಾ ಮಾರುಕಟ್ಟೆಯಲ್ಲಿರುವ ಬೇಡಿಕೆಗಳಿಗೆ ಅನುಸಾರವಾಗಿ ಪ್ರತಿ ವರ್ಷವೂ ನಮ್ಮ ಶಾಪ್ ಫ್ಲೋರ್ ನಲ್ಲಿ ಒಂದು ಹೊಸ ಮಶಿನ್ ಕಾಲೂರುತ್ತಿತ್ತು. ಈಗ ಈ ಸೆಟಪ್ ಸಿ.ಎನ್.ಸಿ. ಮಶಿನ್ ಗಳಿಂದ ಕೂಡಿದೆ.
ಈ ಕ್ಷೇತ್ರದಲ್ಲಿ ಪ್ರವೇಶಿಸುವುದಾದಲ್ಲಿ ಅದಕ್ಕೋಸ್ಕರ ತಾಂತ್ರಿಕ ಜ್ಞಾನ ಇದು ಇರಲೇಬೇಕು. ಆದರೆ ಅದು ನನಗಿಲ್ಲ. ಇದು ಮಾತ್ರ ನನಗಾದ ದೊಡ್ಡ ನಷ್ಟ. ಈ ರೀತಿಯ ಕೆಲಸವನ್ನು ತಮ್ಮ ಜೀವನದಲ್ಲಿ ನಿರ್ವಹಿಸುವುದಾದಲ್ಲಿ, ಈ ಕ್ಷೇತ್ರದ ಜ್ಞಾನವನ್ನು ಪಡೆದು ಪ್ರಾರಂಭಿಸಬೇಕು. ಇದರಿಂದಾಗಿ ಇನ್ನಷ್ಟು ಹೆಚ್ಚು ಸುಲಭ ಮತ್ತು ಸುಲಲಿತವಾಗಿ ಕಂಪನಿಯನ್ನು ನಡೆಸುವುದು ಸಾಧ್ಯ, ಎಂಬುದಾಗಿ ನನಗೆ ಆಗಾಗ ಅನಿಸುತ್ತಿದೆ. ಈಗ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಇಚ್ಛೆಯು ಯಾವ ಮಹಿಳೆಯರಿಗೆ ಇದೆಯೋ ಅವರು 3D ಅಂದರೆ ಡ್ರೀಮ್ (ಕನಸು), ಡಿಜಾಯರ್ (ಇಚ್ಛಾಶಕ್ತಿ) ಮತ್ತು ಡೆಡಿಕೇಶನ್ (ಸಮರ್ಪಿತ ಭಾವನೆ) ಈ ಮೂರು ಗುಣಗಳಿರುವುದು ಅತ್ಯಾವಶ್ಯವಾಗಿದೆ, ಎಂಬುದಾಗಿ ನನ್ನ ಭಾವನೆ. ಈ ಮೂರೂ ಅಂಶಗಳು ಮಹಿಳೆಯಲ್ಲಿದ್ದಲ್ಲಿ ಅವರು ಯಶಸ್ಸನ್ನು ಪಡೆಯುವುದು ಖಂಡಿತ.
ಶಬ್ದ ನಿರೂಪಣೆ : ಸಯಿ ವಾಬಳೆ,
ಸಹಾಯಕ ಸಂಪಾದಕರು, ಉದ್ಯಮ ಪ್ರಕಾಶನ.