ಸಂಪಾದಕೀಯ

Lohkarya - Udyam Prakashan    07-Apr-2021
Total Views |

1_1  H x W: 0 x
‘ಲೋಹಕಾರ್ಯ’ದ ಓದುಗರಿಗೆ ಹೊಸ ಹಣಕಾಸು ವರ್ಷದ ಶುಭಾಶಯಗಳು. ಉದ್ಯಮಿಗಳೆಲ್ಲರೂ ‘ಮಾರ್ಚ್ ಎಂಡಿಂಗ್’ನ ಆರ್ಥಿಕ ಕೆಲಸಗಳನ್ನು ಮುಗಿಸಿ ಇನ್ನೊಂದು ಹೊಸ ಹಣಕಾಸು ವರ್ಷದಲ್ಲಿ ಕಾಲೂರುತ್ತಿದ್ದಾರೆ. ಅಲ್ಲದೇ ಹೊಸ ಹಣಕಾಸು ವರ್ಷದ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಿಗೂ ಒಂದು ಸವಾಲಾಗಿತ್ತು. ಲಾಕ್ ಡೌನ್ ನ ಸಮಯದಲ್ಲಿ ಉದ್ಯಮ- ವ್ಯವಹಾರಗಳನ್ನು ಉಳಿಸುವುದೇ ಒಂದು ಜಟಿಲವಾದ ಪ್ರಶ್ನೆಯಾಗಿತ್ತು, ಅಲ್ಲದೇ ಇದೊಂದು ಗಂಭೀರ ಪರಿಸ್ಥಿತಿಯಾಗಿತ್ತು. ಅಭಿವೃದ್ಧಿಯನ್ನು ಮಾಡುತ್ತಿರುವ ಎಲ್ಲ ಕ್ಷೇತ್ರಗಳಿಗೂ ಇದರಿಂದ ಬಾಧೆಯುಂಟಾಗಿತ್ತು. ಇದರಿಂದಾಗಿ ದೇಶದ ವಿಕಾಸದ ವೇಗವಂತೂ ತುಂಬಾ ಕುಂಠಿತವಾಗಿತ್ತು. ಕೊರೋನಾ ಸಾಂಕ್ರಾಮಿಕ ರೋಗದ ಮೊದಲ ಹಂತದ ನಂತರ ಎರಡನೇ ಹಂತವು ಎಂಬ ಸ್ಥಿತಿಯು ಕಣ್ಮುಂದೆ ಇದ್ದರೂ ಕೂಡಾ ಕೊರೋನಾ ರೋಗಕ್ಕೆ ಪ್ರತಿಬಂಧಾತ್ಮಕವಾದ ಲಸಿಕೆಯಿಂದಾಗಿ ಆಸೆ ಕಿರಣವೊಂದು ಕಾಣಲಾರಂಭಿಸಿದೆ. ತನ್ಮಧ್ಯೆ ಇನ್ನೊಂದು ಸಕಾರಾತ್ಮಕವಾದ ಅಂಶವೆಂದರೆ, 2021-22 ಈ ಹಣಕಾಸು ವರ್ಷದಲ್ಲಿ ಅರ್ಥವ್ಯವಸ್ಥೆಯ ವೃದ್ಧಿಯ ದರವು 13.7 ಶೇಕಡಾದಷ್ಟು ತಲುಪುವ ಸಾಧ್ಯತೆ ಇದ್ದು ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಂದೇಶವನ್ನು ಜಾಗತಿಕ ಸ್ತರದ ‘ಮುಡೀಜ್’ ಎಂಬ ರೇಟಿಂಗ್ ಎಜನ್ಸಿಯು ನೀಡಿದೆ. ಹಾಗೆಯೇ ಭಾರತದಲ್ಲಿ ಪ್ರಸ್ತುತ ವರ್ಷದಲ್ಲಿ GDP ಯು 7 ಶೇಕಡಾದಷ್ಟು ಇರಬಲ್ಲದು, ಎಂಬುದಾಗಿಯೂ ಹೇಳಲಾಗುತ್ತಿದೆ. 2020-21 ಈ ಹಣಕಾಸು ವರ್ಷದಲ್ಲಿ GDP ಮತ್ತು ಔದ್ಯೋಗಿಕ ಉತ್ಪಾದನೆಯಲ್ಲಿ ಮೊದಲ ತ್ರೈಮಾಸಿಕದಲ್ಲಿ (24.4%) ಮತ್ತು ಎರಡನೇ ತ್ರೈಮಾಸಿಕದಲ್ಲಿ (7.3%) ನಿರಂತರ ಇಳಿತವಾಗಿತ್ತು. ಈ ರೀತಿಯ ನಿರಂತರವಾದ ಇಳಿತದಿಂದಾಗಿ ಆಕ್ಟೋಬರ್ ನಿಂದ ಡಿಸೆಂಬರ್ ಈ ಮೂರನೇ ತ್ರೈಮಾಸಿಕದಲ್ಲಿ GDP ಯಲ್ಲಿ 0.4 ಶೇಕಡಾದಷ್ಟು ಹೆಚ್ಚಳವನ್ನು ನೊಂದಾಯಿಸಲಾಯಿತು. ಇದೇ ಹೆಚ್ಚಳವು ಕಳೆದ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 3.3% ದಷ್ಟು ನೊಂದಾಯಿಸಲಾಗಿತ್ತು. ಕಳೆದ ಹಣಕಾಸು ವರ್ಷದಲ್ಲಿ GDP ಯು ಶೇಕಡಾ 4 ರಷ್ಟು ಹೆಚ್ಚಿದ್ದರೂ ಕೂಡಾ 2020-21 ರ ಹಣಕಾಸು ವರ್ಷದಲ್ಲಿ GDP ಯು ಶೇಕಡಾ 8 ರಷ್ಟು ಇಳಿಮುಖವಾಗಬಹುದು ಎಂಬುದಾಗಿ ರಾಷ್ಟ್ರೀಯ ಅಂಕೆ-ಸಂಖ್ಯೆಗಳ ಕಾರ್ಯಾಲಯವು ನೀಡಿರುವ ಅಂಕೆಸಂಖ್ಯೆಗಳಿಂದ ಸ್ಪಷ್ಟವಾಗುತ್ತಿದೆ.
 
ಭಾರತೀಯ ಔದ್ಯೋಗಿಕ ಉತ್ಪಾದನೆಯಲ್ಲಿ ಆಗುವ ಹೆಚ್ಚಳ ಅಥವಾ ಇಳಿತ ಪ್ರಮುಖವಾಗಿ ವಾಹನೋದ್ಯೋಗದಲ್ಲಾಗುವ ಹೆಚ್ಚಳ ಅಥವಾ ಇಳಿತಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ. ಪ್ರಸ್ತುತ ಹಣಕಾಸು ವರ್ಷವು ಮುಗಿಯುತ್ತಿರುವಾಗ, ಮುಂದಿನ ವರ್ಷದಲ್ಲಿ ವಾಹನೋದ್ಯೋಗದಲ್ಲಿ ನಿರಂತರವಾದ ಹೆಚ್ಚಳವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಇಂಧನದಲ್ಲಾಗುತ್ತಿರುವ ಬೆಲೆಯ ಹೆಚ್ಚಳದ ಹಿನ್ನೆಲೆ ಪ್ರಸ್ತುತ ಹಣಕಾಸು ವರ್ಷದಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವಲ್ಲಿ ಗ್ರಾಹಕರ ಒಲುಮೆಯು ಹೆಚ್ಚುತ್ತಿರುವುದು ಗಮನಾರ್ಹ ಅಂಶ. ಆದರೆ ಚಾರ್ಜಿಂಗ್ ಸ್ಟೇಶನ್ ಗಳ ಕೊರತೆ ಮತ್ತು ವೃದ್ಧಿಸುತ್ತಿರುವ ಬೆಲೆ, ಇಂತಹ ಸಮಸ್ಯೆಗಳಿದ್ದರೂ ಕೂಡಾ ಇಲೆಕ್ಟ್ರಿಕ್ ವಾಹನಗಳ ಖರೀದಿಯ ಅಂಕೆ-ಸಂಖ್ಯೆಗಳು ವೃದ್ಧಿಸುತ್ತಿವೆ. ವಾಹನಗಳಿಂದ ಉದ್ಭವಿಸುವ ಪರಿಸರ ಮಾಲಿನ್ಯ ಕಡಿಮೆ ಮಾಡುವ ಜಾಗರೂಕತೆಯ ನೀತಿಗಳು ಎಪ್ರಿಲ್ 22 ರಂದು ಏರ್ಪಡಿಸಲಾಗುವ ‘ವಿಶ್ವ ಭೂ ದಿನ’ಕ್ಕೆ ಪೂರಕವಾಗಿವೆ. ವೈಯಕ್ತಿಕ ಹಂತದಲ್ಲಿ ಹೆಚ್ಚುತ್ತಿರುವ ಈ ಜಾಗರೂಕತೆಯು ಉದ್ಯಮಗಳಲ್ಲಿಯೂ ಬೃಹತ್ ಪ್ರಮಾಣದಲ್ಲಿ ಕಾರ್ಯಗತವಾಗುವುದು ಅಗತ್ಯವಾಗಿದೆ. ಕೈಗಾರಿಕೋದ್ಯಮಗಳಿಂದ ಉದ್ಭವಿಸುವ ವಾಯು ಮಾಲಿನ್ಯ, ತೈಲ ಮಾಲಿನ್ಯ ಮತ್ತು ಇನ್ನಿತರ ರಾಸಾಯನಿಕ ಪದಾರ್ಥಗಳಿಂದ ಉದ್ಭವಿಸುವ ಸುತ್ತಮುತ್ತಿನ ಪರಿಸರ ಮಾಲಿನ್ಯ ಖಂಡಿತವಾಗಿ ಅಪಾಯದ ಸೂಚನೆಯನ್ನು ನೀಡುತ್ತಿದೆ. ಕೈಗಾರಿಕೋದ್ಯಮಗಳಿಂದಾಗಿ ಪರಿಸರ ಮಾಲಿನ್ಯದ ಸ್ತರವು ಗಮನಾರ್ಹವಾಗಿ ಕಡಿಮೆ ಹೇಗೆ ಆಗಬಲ್ಲದು ಅಥವಾ ಅಗಲೇ ಬಾರದು, ಎಂಬ ನಿಟ್ಟಿನಲ್ಲಿ ಎಲ್ಲರೂ ಹೆಜ್ಜೆಗಳನ್ನಿಡುವುದು ಅತ್ಯಗತ್ಯವಾಗಿದೆ. ಇದಕ್ಕೋಸ್ಕರ ಅನೇಕ ಕಂಪನಿಗಳು ಮುಂದಾಳುತನವನ್ನು ವಹಿಸುತ್ತಿವೆ. ಅನೇಕ ಕಂಪನಿಗಳಲ್ಲಿ ಅಭಿವೃದ್ಧಿಯ ಶಾಶ್ವತವಾದ ಮಾಡೆಲ್ ಗಳನ್ನು ಅವಲಂಬಿಸಲಾಗುತ್ತಿದೆ. ವೇಸ್ಟ್ ಮ್ಯಾನೆಜ್ ಮೆಂಟ್, ವಿದ್ಯುತ್ತಿನ ಯೋಗ್ಯ ಬಳಕೆ (ಆಪ್ಟಿಮೈಜ್ಡ್ ಎನರ್ಜಿ ಕಂಜಂಪ್ಶನ್), ಕಾರ್ಬನ್ ಹೊರಹೊಮ್ಮುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಖಾನೆಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಭವಿಷ್ಯತ್ಕಾಲದಲ್ಲಿ ಇಂತಹ ಶಾಶ್ವತವಾದ ನಿರ್ಮಿತಿಗೆ (ಸಸ್ಟೆನೇಬಲ್ ಮ್ಯಾನ್ಯುಫ್ಯಾಕ್ಚರಿಂಗ್) ಪ್ರಾಧಾನ್ಯತೆ ನೀಡುವ ಕಾಲವೇ ಆಗಬಲ್ಲದು. ಇದಕ್ಕೆ ಅನುಸಾರವಾಗಿ ಪ್ರತಿಯೊಬ್ಬರೂ ತಮ್ಮ ವ್ಯವಹಾರಗಳಲ್ಲಿ ಆವಶ್ಯಕವಿರುವ ಸುಧಾರಣೆಗಳನ್ನು ಮಾಡಬೇಕು.
 
ವ್ಯವಸಾಯಯನ್ನು ದೃಢಪಡಿಸಲು ಮತ್ತು ಲಾಭಕಾರಿಯಾಗಿ ಮಾಡಲು ನೇರವಾಗಿ ಯಂತ್ರಣೆಯ ಪ್ರಕ್ರಿಯೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ‘ಲೋಹಕಾರ್ಯ’ ಸಂಚಿಕೆಯಲ್ಲಿ ನಿರಂತರವಾಗಿ ಓದುಗರಿಗೆ ನೀಡುತ್ತಿದ್ದೇವೆ. ‘ಲೋಹಕಾರ್ಯ’ದ ಪ್ರಸ್ತುತ ಸಂಚಿಕೆಯಲ್ಲಿ ಟರ್ನಿಂಗ್ ಪ್ರಕ್ರಿಯೆಯ ಕುರಿತು ವಿಸ್ತಾರವಾದ ಮಾಹಿತಿಯನ್ನು ನೀಡಲಾಗಿದೆ. ಯಂತ್ರಭಾಗಗಳ ಉಚ್ಚಗುಣಮಟ್ಟದ ಆವಶ್ಯಕತೆಗೋಸ್ಕರ ಹಾರಿಝಾಂಟಲ್ ಮತ್ತು ವರ್ಟಿಕಲ್ ಸಿ.ಎನ್.ಸಿ. ಟರ್ನಿಂಗ್ ಸೆಂಟರ್ ಮೂಲಕ ಯಂತ್ರಣೆಯನ್ನು ಮಾಡಲಾಗುತ್ತದೆ. ಹಾರಿಝಾಂಟಲ್ ಮತ್ತು ವರ್ಟಿಕಲ್ ಟರ್ನಿಂಗ್ ಸೆಂಟರ್ ಗಳಲ್ಲಿರುವ ಮೂಲಭೂತ ವ್ಯತ್ಯಾಸವನ್ನು ತಿಳಿಸುವ ಲೇಖನದೊಂದಿಗೆ ಟರ್ನಿಂಗ್ ಪ್ರಕ್ರಿಯೆಯಲ್ಲಿ ಟಾಲರನ್ಸ್ ಮತ್ತು ಜಾಮೆಟ್ರಿಕಲ್ ನಿಖರತೆಯನ್ನು ಉಚ್ಚಮಟ್ಟದಲ್ಲಿ ಪಡೆಯಲು ಪರಿಣಾಮಕಾರಿಯಾದ ಪ್ರಮುಖ ಅಂಶಗಳ ಕುರಿತಾದ ಚರ್ಚೆಯನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ. ಟರ್ನಿಂಗ್ ಸೆಟಂರ್ ನಲ್ಲಿರುವ ಡ್ರಿವನ್ ಟೂಲ್ ಹೋಲ್ಡರ್ ಗಳ ಕುರಿತು ಮತ್ತು HRSA ಯಲ್ಲಿ ಟರ್ನಿಂಗ್ ಮಾಡುವಾಗ ಗಮನದಲ್ಲಿಡಬೇಕಾದ ಮಹತ್ವಪೂರ್ಣವಾದ ತಾಂತ್ರಿಕ ಅಂಶಗಳ ಕುರಿತಾದ ಮಾಹಿತಿ ಈ ಸಂಚಿಕೆಯಲ್ಲಿದೆ. ಇದರೊಂದಿಗೆ ಜಿಗ್ಸ್ ಮತ್ತು ಫಿಕ್ಸ್ಚರ್ಸ್, ಟೂಲಿಂಗ್ ನಲ್ಲಿ ಮಾಡಲಾಗುವ ಸುಧಾರಣೆಗಳು, ಸಿ.ಎನ್.ಸಿ. ಪ್ರೋಗ್ರಾಮಿಂಗ್, ಇಂಡಸ್ಟ್ರಿ 4.0 ಮತ್ತು IoT, ಹಣಕಾಸು ಯೋಜನೆಯಂತಹ ಲೇಖಮಾಲೆಗಳು ದೈನಂದಿನ ಕೆಲಸಗಳಲ್ಲಿ ತಮಗೆ ಉಪಯುಕ್ತವಾಗಲಿವೆ, ಎಂಬ ಖಾತರಿ ಇದೆ.
ದೀಪಕ ದೇವಧರ